Index   ವಚನ - 125    Search  
 
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ, ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು, ಕಾಯ ಧೋತ್ರ, ಗಾಯತ್ರಿಮಂತ್ರ ಪುರುಷಪ್ರಮಾಣ ದಂಡ, `ಭವತಿಭಿಕ್ಷಾಂದೇಹಿ'ಯೆಂದು ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ. ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ. ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು. ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು, ತಿನ್ನಹೇಳಿತ್ತು ವೇದ. ಅದೆಂತೆಂದಡೆ: ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಕುದುರೆಯ ತಿಂಬ ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ ಜಿನುಗು ಹೊಲೆಯರ ಮುಖವಂ ನೋಡಲಾಗದು. ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ ಕುನ್ನಿ ಹೊಲೆಯರ ಮುಖವ ನೋಡಲಾಗದು. ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಹೋತನ ಕೊಲ್ಲ ಹೇಳಿತ್ತಲ್ಲದೆ, ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು. ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ ಅನಾಚಾರಿ ಹೊಲೆಯರ ಮುಖವಂ ನೋಡಲಾಗದು ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು. ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ? ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ? ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.