Index   ವಚನ - 162    Search  
 
ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ ಪಂಚಾಮೃತಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂ ಅಭಿವಂದಿಸಿ ಶಿವನ ವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ಪಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿ ಜಲಮಿಶ್ರವಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗಾರ್ಚನೆಯಂ ಮಾಡುವ ಶರಣ, ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞ, ಆತನೇ ಸದ್ಯೋನ್ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.