ಪರಶಿವನೇ ಶ್ರೀಗುರು, ಶ್ರೀಗುರುವೇ ಪರಶಿವನು,
ಶ್ರೀಗುರುವೇ ಶಿವಲಿಂಗ, ಆ ಶಿವಲಿಂಗವೇ ಜಂಗಮಲಿಂಗ,
ಆ ಜಂಗಮಲಿಂಗವೆಂದಲ್ಲಿಯೇ ಪ್ರಸಾದಲಿಂಗ,
ಪ್ರಸಾದಲಿಂಗವೆಂದಲ್ಲಿಯೇ ಮುಕ್ತಿ.
ಇದು ಸ್ವಭಾವ, ಇದು ಮಹಾಸದ್ಭಾವ.
ಈ ಭಾವವು ಅಣುಮಾತ್ರ ಕಿಂಚಿತ ದುರ್ಭಾವವಾಗಿ ತಪ್ಪಿದಡೆ
ಆ ಕ್ಷಣ ಜಾರಿ ಮೀರಿತ್ತು ಆ ಸಾಧ್ಯ.
ಭಾವ ತಪ್ಪಿದ ಬಳಿಕ ಶಿವನೊಲವು ತಪ್ಪುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.