Index   ವಚನ - 171    Search  
 
ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ. ಅನ್ಯಾರ್ಜಿತದಲ್ಲಿ ಉದರವ ಹೊರೆಯದಿಹುದೆ ಸ್ನಾನ. ಮನದ ಮೈಲಿಗೆಯ ಕಳೆವುದೆ ಮಡಿವರ್ಗ. ಶರಣರಲ್ಲಿ ಮಂಗಳಭಾವದಿರವೆ ಭಸ್ಮಲೇಪನ. ವಿಶ್ವತೋಮುಖನ ನೋಟಕಾರುಣ್ಯ ತನ್ನ ಮೇಲಿರಲು ರುದ್ರಾಕ್ಷಧಾರಣ. ಹಿಂಸೆಯ ಮಾಡದಿಹುದೆ ಆತ್ಮಶುದ್ಧಿ. ನಿರಂಹಕಾರವೆ ಪದ್ಮಾಸನ, ಸುಚಿತ್ತವೆ ದೃಷ್ಟಿ, ಸತ್ಯವೆ ಲಿಂಗ, ಸಾಹಿತ್ಯವೆ ಅಗ್ಗವಣಿ, ದಯಾವಾಕ್ಯವೆ ಗಂಧ, ಅಕ್ಷರವಿಚಾರವೆ ಅಕ್ಷತೆ, ನಿರ್ಮಲವೆ ಪುಷ್ಪ, ನಿಸ್ಸಂದೇಹವೆ ಧೂಪ, ನಿಸ್ಸಂಕಲ್ಪವೆ ದೀಪ, ನಿಂದೆಯ ಮಾಡದಿಹುದೆ ಜಪ, ಪರಿಣಾಮವೆ ಆರೋಗಣೆ, ಅಖಂಡಿತವೆ ತಾಂಬೂಲ. ಇಂತೀ ಇಷ್ಟಲಿಂಗದ ಪೂಜೆಯ ಪರಿಯಲ್ಲಿ ಪ್ರಾಣಲಿಂಗದ ಪೂಜೆಯ ಮಾಡಲು ಅಂತರಂಗ ಬಹಿರಂಗ ಸರ್ವಾಂಗಲಿಂಗವಾಗಿರ್ಪುದು. ಇದು ಸಹಜ, ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.