Index   ವಚನ - 197    Search  
 
ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ ಕಾಯವು ಭೂತಕಾಯವು. ವಾಯುಪ್ರಾಣಿಗೆ ಉತ್ಪತ್ತಿಸ್ಥಿತಿಲಯ ಕಾರಣಕಾಯವು. ಈ ಪರಿಯ ಉತ್ಪತ್ತಿಯು ದೇವದಾನವ ಮಾನವರಿಗೆಯೂ ಒಂದೇ ಪರಿ. ಶ್ರೀಗುರುವಿನ ಸೃಷ್ಟಿಯಿಂದಲೂ, ಮಹಾಪ್ರಸಾದದಿಂದಲೂ ಮಹಾಮಂತ್ರಸಮ್ಮಿಶ್ರದಿಂದಾದ ಕಾಯವು ಪ್ರಸಾದಕಾಯವು. ಮಹಾಮಂತ್ರಪಿಂಡವು ಭಕ್ತಿಕಾಯವು. ಲಿಂಗಪ್ರಾಣಿಗೆ ಉತ್ಪತ್ತಿಸ್ಥಿತಿಲಯವಿಲ್ಲ. ಸತ್ಯನು ಸದ್ಯೋನ್ಮುಕ್ತನು. ಈ ಪರಿಯ ಶ್ರೀಗುರುಕಾರುಣ್ಯವ ಪಡೆದ ಮಹಾತ್ಮರಿಗೆ ಒಂದೇ ಪರಿ. ಶ್ರೀಗುರುವಿನ ಕಾರುಣ್ಯದ ಪರಿ ಶಿವಭಕ್ತನ ಇರವಿನ ಪರಿ ಇಂತುಟಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರಿಗೆ ಲೋಕದ ಮಾನವರು ಸರಿ ಎಂದಡೆ ನಾಯಕನರಕ ತಪ್ಪದು.