ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು
ಸದ್ಗುರುವನರಸಿಕೊಂಡು ಬಂದು,
ಅವನ ಕಾರುಣ್ಯದಿಂದ ಮುಕ್ತಿಯಂ ಪಡೆದೆವೆಂದು
ಆ ಶ್ರೀಸದ್ಗುರುವಿಗೆ ದಂಡಪ್ರಣಾಮವಂ ಮಾಡಿ
ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು,
ಎಲೆ ದೇವಾ, ಎನ್ನ ಭವಿತನವನಂ ಹಿಂಗಿಸಿ
ನಿಮ್ಮ ಕಾರುಣ್ಯದಿಂದ ಎನ್ನ ಭಕ್ತನಂ ಮಾಡುವುದೆಂದು
ಶ್ರೀಗುರುವಿಂಗೆ ಬಿನ್ನಹಂ ಮಾಡಲು,
ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಷ್ಯನಂ ಕಂಡು,
ತಮ್ಮ ಕೃಪಾವಲೋಕನದಿಂ ನೋಡಿ,
ಆ ಭವಿಯ ಪೂರ್ವಾಶ್ರಯಮಂ ಕಳೆದು, ಪುನರ್ಜಾತನಂ ಮಾಡಿ
ಆತನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡುವ ಕ್ರಮವೆಂತೆಂದಡೆ:
`ಜ್ವಲತ್ಕಾಲಾನಲಾಭಾಸಾ ತಟಿತ್‍ಕೋಟಿಸಮಪ್ರಭಾ
ತಸ್ಯೋರ್ಧ್ಯೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ
ಯಾ ಕಲಾ ಪರಮಾ ಸೂಕ್ಷ್ಮಾ ತತ್ತ್ವಾನಾಂ ಬೋಧಿನೀ ಪರಾ
ತಾಮಾಕರ್ಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್
ಪ್ರಾಣಪ್ರತಿಷ್ಠಾಮಂತ್ರಂ ಚ ಮೂಲಮತ್ರಂ ಪೆಠೀದಪಿ
ಅಥಾಸ್ಮಿನ್ ಸಂಸ್ಕೃತೇ ಲಿಂಗೇ ಸುಸ್ಥಿರೋ ಭವ ಸರ್ವದಾ'
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.