Index   ವಚನ - 212    Search  
 
ಮನದಲ್ಲಿ ಮಹವನರಿದು ಮನ ನಿರ್ದೇಶವಾಗಿ ದೇಶಾಂತರಿಯಾಗದೆ, ಮನ ವಿಕಳವಾಗಿ ಹೊರಹೊಂಟುದು ವೇಷಾಂತರವಯ್ಯಾ. ಕಂಡವರ ಕಾಡಿ, ನಿಂದವರ ಬೇಡಿ, [ಜಾತಿ ಎನ್ನದೆ] ಅಜಾತಿ ಎನ್ನದೆ, ಆಚಾರವೆನ್ನದೆ, ಅನಾಚಾರವೆನ್ನದೆ, ತಿರಿದುಂಡು ವೇಷಡಂಭಕತ್ವದಿಂ ಲಾಂಛನವ ಹೊತ್ತು ಕಂಡಲ್ಲಿ ಲಜ್ಜೆಗೆಡುವುದು ತನ್ನ ಮುನ್ನಿನ ದುಷ್ಕೃತ ಪೂರ್ವಕರ್ಮದ ಫಲವಯ್ಯ. ಮತ್ತೆಂತೆಂದಡೆ : ಮನ ನಿರ್ವಾಣವಾಗಿ ವಿವೇಕಜ್ಞಾನಪರಮಾರ್ಥದಲ್ಲಿ ಪರಿಣಾಮಿಯಾಗಿ ಸುಳಿದು ಸೂತಕಿಯಲ್ಲದೆ, ನಿಂದು ಬದ್ಧನಲ್ಲದೆ, ಸುಜ್ಞಾನದಲ್ಲಿ ಸುಳಿದು, ನಿರ್ಮಲದಲ್ಲಿ ನಿಂದವರು ಅವರು ಪರದೇಶಾಂತರಿಗಳು, ಅವರು ನಿಜನಿವಾಸಿಗಳು, ಅವರುಗಳಿಗೆ ನಮೋ ಎಂಬೆ, ಉರಿಲಿಂಗಿಪೆದ್ದಿಪ್ರಿಯ ವಿಶ್ವೇಶ್ವರಾ.