Index   ವಚನ - 244    Search  
 
ಲಿಂಗವತನು ಲಿಂಗವಂತರೊಡನೆ ಸತ್ಯವ ನುಡಿವುದು, ಸಹಜದಲ್ಲಿ ನಡೆವುದು, ಪ್ರೇಮದಲ್ಲಿ ಸಂಗವ ಮಾಡುವುದು. ಈ ಕ್ರೀ ಇಹಪರ ಸಿದ್ದಿ, ಲಿಂಗವನರಿವುದಕ್ಕೆ ದೃಷ್ಟ. ಲಿಂಗಾರ್ಚನೆಯ ಕ್ರೀ. ಅಗ ಒಲಿದುದಕ್ಕೆ ಚಿಹ್ನ, ಇದು ನಿತ್ಯ. ಲಿಂಗವಂತನು ಲಿಂಗವಂತರೊಡನೆ ಹೇಮದಾಸೆಗೆ ಪ್ರೇಮಗುಂದಿ ನುಡಿಯಲಾಗದು. ಅಸತ್ಯವ ನುಡಿಯಲಾಗದು, ಕ್ರೋಧಿಸಿ, ನುಡಿಯಲಾಗದು, ವಂಚಿಸಿ ನುಡಿಯಲಾಗದು. ವೇದಶಾಸ್ತ್ರ ಆಗಮ ಪುರಾಣ ಪುರಾತನರ ಚರಿತ್ರವನರಿಯದೆ ಆದಿ ಮಧ್ಯ ಪರಿಪಕ್ವತೆಯನರಿಯದೆ, ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು. ಆಜ್ಞಾನಕ್ರೀಯಲ್ಲಿ ವರ್ತಿಸಿ ನಡೆಯಲು ಇಹಪರವಿಲ್ಲ, ಲಿಂಗವನರಿಯಬಾರದು, ಲಿಂಗವಂತರನೆಂತೂ ಅರಿಯಬಾರದು. ಅರಿಯದವಂಗೆ ಪೂಜಿಸಲೆಂತಹುದು? ಪೂಜೆ ಇಲ್ಲದವಂಗೆ ಭಕ್ತಿ ಎಂತಹುದು? ಭಕ್ತಿ ಇಲ್ಲದವಂಗೆ ಪ್ರಸಾದವೆಂತಹುದು? ಪ್ರಸಾದವಿಲ್ಲದವಂಗೆ ಮುಕ್ತಿ ಎಂತಹುದು? ಇದನರಿದು, ಲಿಂಗವಂತನು ಲಿಂಗವಂತರಲ್ಲಿ ಸತ್ಯಸಂಭಾಷಣೆ ಯೋಗವಾದಡೆ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.