Index   ವಚನ - 246    Search  
 
ಲಿಂಗವಂತರ ಲಿಂಗವೆಂಬುದೇ ಶೀಲ, ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ, ಲಿಂಗವಂತರ ಅರ್ಥ ಪ್ರಾಣ ಅಭಿಮಾನಕ್ಕೆ ತಪ್ಪದಿಪ್ಪುದೇ ಶೀಲ, ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ ಮಹಾಶೀಲವಯ್ಯಾ, ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ. ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು. ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.