Index   ವಚನ - 251    Search  
 
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ? ಅಶನವ ಬಿಟ್ಟಡೇನು, ಪರಾಕಿಯಂತೆ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ? ಸಾಮರ್ಥ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ? ಏನ ಮಾಡಿದಡೇನು? ಏನ ಕೇಳಿದಡೇನು? ಸಾಮರ್ಥ್ಯಪುರುಷರೆನಿಸಿಕೊಂಡರೇನು? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ ಸಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.