Index   ವಚನ - 255    Search  
 
ಲಿಂಗವು ಕೊಟ್ಟ ಆಯುಷ್ಯದಲ್ಲಿ ನಿಮಿಷಾರ್ಧ ನಿಮಿಷಾರ್ಧ ಹೆಚ್ಚಿಸಬಾರದು, ನಿಮಿಷಾರ್ಧ ಕುಂದಿಸಬಾರದು. ಶಿವಲಿಂಗವು ಕೊಟ್ಟ ಭಾಷೆಯಲ್ಲಿ ಕಾಣಿಯ ಕುಂದಿಸಬಾರದು, ಕಾಣಿಯ ಹೆಚ್ಚಿಸಬಾರದು. ಹರಿಬ್ರಹ್ಮಾದಿಗಳಿಗೂ ತೃಣದಂತಪ್ಪ ಕಾರ್ಯವ ಮಾಡಬಾರದು. ಉತ್ಪತ್ತಿ ಸ್ಥಿತಿ ಲಯಕ್ಕೆ ಶಿವನೆ ಕರ್ತನು, ಮತ್ತಾರೂ ಇಲ್ಲ. ಇದನರಿದು ಇನ್ನೇಕನ್ಯರಾಸೆ ಮಾಡದಿರು. ಅನ್ಯರು ಆಯುಷ್ಯ [ಭವಿಷ್ಯ] ಭೋಗಾದಿಭೋಗಂಗಳ ಕೊಟ್ಟರೆಂಬ ಸಂತೋಷ ಬೇಡ, ಕೊಡರೆಂಬ ಕ್ಲೇಶ ಬೇಡ. ಶಿವಾಧೀನವೆಂಬುದನರಿದು, `ತೇನ ವಿನಾ ತೃಣಾಗ್ರಮಪಿ ನ ಚಲತಿ' ಎಂಬುದನರಿದು ಪರಿಣಾಮಿಸು. ಪರಿಣಾಮದಿಂ ಲಿಂಗವನರ್ಚಿಸು ಪೂಜಿಸು ಕೇವಲ ವಿಶ್ವಾಸಂ ಮಾಡಿದಡೆ ಬೇಡಿತ್ತ ಕೊಡುವ ಇಹಪರ ಸಿದ್ಧಿ, ನೆರೆ ನಂಬು ನಂಬು ಮನವೇ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.