Index   ವಚನ - 260    Search  
 
ಲಿಂಗಾರ್ಪಿತವ ಮಾಡಿ ಪ್ರಸಾದವನಲ್ಲದೆ ಭೋಗಿಸೆನೆಂಬ ಪ್ರಸಾದಿಗಳಿಗೆ ಇನ್ನೆಂತಯ್ಯಾ? ಅನರ್ಪಿತ ಭೋಗವು ಸಂಭವಿಸಿ ದೋಷವೇ ಪ್ರಾಪ್ತಿಯಾದ ಪರಿಯ ನೋಡಾ. ಅದೆಂತೋ ಅನರ್ಪಿತವ ಮನದಲ್ಲಿ ನೆನೆಯಬಹುದು? ಅದೆಂತೋ ಅನರ್ಪಿತವ ಪಂಚೇಂದ್ರಿಯಗಳಲ್ಲಿ ಮುಟ್ಟಬಹುದು? ಅಕಟಕಟಾ, ಅರ್ಪಿತವಿಲ್ಲದೆ ಸರ್ವವಸ್ತುವ ಅಂಗವಿಸಿ ಭೋಗಿಸಬಹುದೆ? ಅಂಗ ಲಿಂಗವಾಗಿ ಲಿಂಗ ಪ್ರಾಣವಾಗಿ ಪ್ರಾಣ ಮನವಾಗಿ ಮನವು ಲಿಂಗಸ್ವಾಯತವಾಗಿ ಭಾವಶುದ್ಧವಾ[ಗೆ] ಮನವೇ ಲಿಂಗವು. ಲಿಂಗ ಮುಂದು ಮನ ಹಿಂದಾಗಿ ಸರ್ವಕ್ರೀಯ ವರ್ತಿಸುವುದು, ಈ ಕ್ರೀ ಸರ್ವಾರ್ಪಿತ. ಇದು ತಾತ್ಪರ್ಯ ಕಳೆ, ಇದೇ ಅರ್ಪಿತಕ್ಕೆ ಜೀವ ಕಳೆ, ಇಂತಹ ಮಹಿಮೆಗೆ ಸರ್ವಪ್ರಸಾದ, ಅದು: ಪಂಚೇಂದ್ರಿಯವೆಲ್ಲವು ಲಿಂಗಾರ್ಪಿತ, ಆತನ ಭೋಗವೆಲ್ಲವೂ ಪ್ರಸಾದಭೋಗ, ಆತನು ಸದ್ಯೋನ್ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.