Index   ವಚನ - 261    Search  
 
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ| ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ|| ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂʼ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷ್ಠೆಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ| ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ|| ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ| ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ|| ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ| ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ|| ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂʼ ಎಂದುದಾಗಿ, `ಲಿಂಗಂ ತಾಪತ್ರಯಹರಂʼ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂʼ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂʼ| ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂʼ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ| ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ|| ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ| ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ|| ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷ್ಠೆಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.