Index   ವಚನ - 263    Search  
 
ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು ಶರಣ ಲಿಂಗವಾಗಿ, ಲಿಂಗಭರಿತ ಶರಣನಾಗಿ ಬದುಕಿಸಿದನು ಕೇಳಿರಣ್ಣಾ. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ಶರಣರೂಪಾಗಿ ಬಂದು ಶ್ರೀಮೂರ್ತಿಯ ತೋರಿ ಪಾಪವ ಕಳೆದನು. ಉಪಪಾತಕಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹಂತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್' ಭಕ್ತಜನಂಗಳ ಕೂಡೆ ಸಂಭಾಷಣೆಯ ಮಾಡಿ ಮಹಾಪಾತಕಂಗಳ ಕಳೆದನು. ಮಹಾಪಾತಕಕೋಟಿಘ್ನಃ ಶ್ವಪಚೋsಪಿ ಲಿಂಗಪೂಜಕಃ| ತತ್ಸಂಭಾಷಣಾನ್ಮುಕ್ತಿರ್ಗಣಮುಖ್ಯಗಣೇಶ್ವರಃ' ಶ್ರೀಗುರುಮೂರ್ತಿಯ ತೋರಿ ಸಂಭಾಷಣೆಯಂ ಮಾಡಿ ಪಾದೋದಕ ಪ್ರಸಾದವನಿತ್ತು ಸಲಹಿ ರಕ್ಷಿಸಲು ಬಂದನು ಕಾಣಿರಣ್ಣಾ. ಇದನರಿಯದೆ, ಶರಣರು ದ್ರವ್ಯಾರ್ಥಿಗಳಾಗಿ ಬಂದರೆಂಬಿರಿ, ನಾನು ಮಾಡಿದೆನು ಶರಣರು ಮಾಡಿಸಿಕೊಂಡಹರೆಂದೆಂಬಿರಿ, ಉಂಟೆಂದಿರಿ, ಇಲ್ಲೆಂದಿರಿ, ಈ ಪರಿ ಅಜ್ಞಾನದಲ್ಲಿ ಕಂಡು, ನುಡಿದು, ದೋಷಿಗಳಹಿರಿ. ಶರಣರ ಶಿವನೆಂದು ನಂಬಿಮಾಡಲು ಸಿರಿಯಾಳನು ಮಗನ ಕೊಟ್ಟಡೆ ಕೈಲಾಸವ ಕೊಟ್ಟನು. ದಾಸ ವಸ್ತ್ರನಿತ್ತಡೆ ಮಹಾವಸ್ತು ತವನಿಧಿಯ ಕೊಟ್ಟನು. ಬಲ್ಲಾಳ ವಧುವನಿತ್ತಡೆ, ತನ್ನನೇ ಕೊಟ್ಟನು. ಈ ಪರಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತವನೆ ಕೊಟ್ಟನು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ| ದೇವಸಂಪೂಜ್ಯಮಾನೇಷು ಗಣಮುಖ್ಯೋ ಗಣೇಶ್ವರಃ|| ಭಕ್ತಿಯಿಂ ನಂಬಿ ಮಾಡಿರೆ, ದುಭಾರ್ವಿಸಿ ಕೆಡಬೇಡ. ಶರಣರೇ ಶಿವನೆಂದು ನಂಬಿ ಮಾಡಿರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಕೂಡುವುದಯ್ಯಾ.