Index   ವಚನ - 264    Search  
 
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ? ಅಕಟಕಟಾ, ಈ ಹೀಂಗೆ ಶಿವಾಚಾರ? ಈ ಹೀಂಗೆ ಭೃತ್ಯಾಚಾರ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.