ವೇದವನೋದಿ ಕೇಳಿ
ವೇದದ ವರ್ಮವನರಿದ ಫಲ ದಾಸೋಹವಯ್ಯಾ.
ಶಾಸ್ತ್ರವನೋದಿ ಕೇಳಿ
ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾಣವನೋದಿ ಕೇಳಿ
ಪುರಾಣದ ವರ್ಮವನರಿದ ಫಲ ದಾಸೋಹವಯ್ಯಾ.
ಆಗಮವನೋದಿ ಕೇಳಿ
ಆಗಮದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾತನರ ಗೀತ ವಚನ ಪ್ರಸಂಗಾನುಭವದಲ್ಲಿ ದೃಷ್ಟಫಲ
ದಾಸೋಹವಯ್ಯಾ.
ವೇದಶಾಸ್ತ್ರ ಪುರಾಣ ಆಗಮ ಪುರಾತನರ ಗೀತದ ವಚನ ಪ್ರಸಂಗವನರಿದು
ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿದಂತೆ.
ಆ ಕೇಳುವೆ, ಮರುಳ ಕೇಳುವೆಯಂತೆ.
ಅವನೇತಕ್ಕೂ ಬಾರ್ತೆಯಲ್ಲಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.