Index   ವಚನ - 273    Search  
 
ವೇದವನೋದಿ ಕೇಳಿದಡೇನು? ವೇದಜ್ಞನಪ್ಪನಲ್ಲದೆ ಭಕ್ತನಲ್ಲ. ಶಾಸ್ತ್ರಗಳನೋದಿ ಕೇಳಿದಡೇನು? ಮಹಾಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ. ಪುರಾಣವನೋದಿ ಕೇಳಿದಡೇನು? ಪುರಾಣಿಕನಪ್ಪನಲ್ಲದೆ ಭಕ್ತನಲ್ಲ. ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ. ಇಂತೀ ಸರ್ವವಿದ್ಯೆಂಗಳನೋದಿ ಕೇಳಿದಡೇನು? ಇದಿರ ಬೋಧಿಸಿ ಉದರವ ಹೊರೆವ ಉದರಪೋಷಕನಪ್ಪನಲ್ಲದೆ ಭಕ್ತನಲ್ಲ. ಯಮಬಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ. ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ. ಇದು ಕಾರಣ, ಶ್ರೀಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ ಭಕ್ತದೇಹಿಕ ದೇವ ಪರಶಿವನು, `ಭಕ್ತಕಾಯ ಮಮಕಾಯ' ಎಂದುದಾಗಿ. `ಲಿಂಗಾಲಿಂಗೀ ಮಹಾಜೀವೀ' ಎಂದುದಾಗಿ ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ ಸತ್ಯನೆಂಬೆ, ಮುಕ್ತನೆಂಬೆ, ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.