ಶಿವನೆ, ನಿಮ್ಮ ನಾ ಬಲ್ಲೆನು.
`ಗುರುದೇವೋ ಮಹಾದೇವೋ' ಎಂದುದಾಗಿ
ಶ್ರೀಗುರು ರೂಪಾಗಿ ಬಂದು ದೀಕ್ಷೆಯಂ ಮಾಡಿ
ಶಿವಲಿಂಗವ ಬಿಜಯಂಗೈಸಿ ಕೊಟ್ಟಿರಿ, ಜಂಗಮವ ತೋರಿದಿರಿ.
ಇದು ಕಾರಣ,
ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ.
ನಿಮ್ಮ ಶಿಶುವೆಂದು ಕರುಣಿಸಿ ಪ್ರಸಾದವನಿಕ್ಕಿ ರಕ್ಷಸಿದಿರಿ.
ಇದು ಕಾರಣದಿಂದವೂ,
ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ.
ಮತ್ತೆ ಮರೆಮಾಡಿ,
ಜ್ಞಾನವನೂ ಅಜ್ಞಾನವನೂ, ಭಕ್ತಿಯನೂ ಅಭಕ್ತಿಯನೂ,
ಸುಖವನೂ ದುಃಖವನೂ ಒಡ್ಡಿ ಕಾಡಿದಿರಯ್ಯಾ .
ಇವೆಲ್ಲವಕ್ಕೆಯೂ ನೀವೆ ಕಾರಣ.
ಇದು ಕಾರಣ,
ನಿಮ್ಮ ಬೇರಬಲ್ಲವರಿಗೆ ಎಲೆಯ ತೋರಿ
ಆಳವಾಡಿ ಕಾಡುವರೆ? ಕಾಡದಿರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.