Index   ವಚನ - 290    Search  
 
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್| ಅನಿಂದಿತಮನೌಪಮ್ಯಮಪ್ರಮೇಯಮನಾಮಯಮ್|| ಎಂದು ವೇದಾಗಮಗಳು ಹೇಳಿದ ಹಾಗೆ ಶಿವಶಿವಾ ಹರಹರಾ ಎಂದೆನ್ನದೆ ಭೃಗು ಶಾಪದಿಂದ ಭವಕ್ಕೆ ಬಂದು ಸತ್ತು ಕೆಟ್ಟು ಹೋದ. ದಶರಥರಾಯನು ನಾಚಿಕೆಯಿಲ್ಲದೆ ರಾಮ ರಾಮ ಎಂದು ನೆನೆದರೂ, ಆ ರಾಮ, ರಾವಣನ ಕೊಂದ ಬ್ರಹ್ಮಹತ್ಯಾದೋಷಕ್ಕೆ ಅನೇಕ ಶಿವಲಿಂಗಗಳ ಪ್ರತಿಷ್ಠೆಯ ಮಾಡಿ ಪೂಜಿಸಿದ. ಹರಿಯು ಆ ಮಹಾಲಿಂಗವ ನೆನೆವುದಕ್ಕೆ ನಾಲಗೆ ಮೂಗ ನಂಜುತ್ತ ಇಹನು. ಕೃಷ್ಣನ ಅಂಗಾಲಕಣ್ಣ ಬೇಡನೆಚ್ಚು ಕೊಂದನೆಂದರೆ, ನಾಚದೆ ಪರಿಣಮಿಸುತ್ತಿಹರು. ನಾರಸಿಂಹನವತಾರವ ಶರಭರುದ್ರ ತೀರ್ಚಿಸಿದನೆಂದರೆ ಉರಿದೇಳುತ್ತಿಹರು. ಹರಿ ಗೋವಳರೊಡನುಂಡಯೆಂದರೆ ಪರಿಣಮಿಸಿ ಸಂತೋಷವಹರು. ಆ ಹರಿ ರಾಮೇಶ್ವರದೇವರ ಪ್ರಸಾದವ ಕೊಂಡನೆಂದರೆ ಅವಮಾನಿಸುತ್ತಿಹರು. ಸತ್ತು ಕೆಟ್ಟು ಹುಟ್ಟಿದ ಅಜ್ಞಾನಿ ವಸುದೇವನ ಮಗ ಹರಿಯೆಂದರೆ ನಲಿದುಬ್ಬುವರು. ಆ ಹರಿ ಮಹಾದೇವನ ಮಗನೆಂದರೆ ಸಿಡಿಮಿಡಿಗೊಂಬರು. ಹಲವು ಗಂಡರ ನೆರೆದ ಕುಂತಿಯ ಕಾಲಿಗೆ ಹರಿ ಎರಗಿದನೆಂದರೆ ನಲಿದುಬ್ಬಿ ಕೊಂಡಾಡುವರು. ಆ ಹರಿ ಕಾಮಿತಫಲದಾಯ[ಕ]ನಾದ ಶಿವನ ಶ್ರೀಪಾದಕ್ಕೆ ನಯನಕಮಲಮನರ್ಪಿಸಿ ಚಕ್ರಮಂ ಪಿಡಿದನೆಂದರೆ ಚಿಂತಿಸಿ [ಕರ]ಕರಸುತ್ತಿಹರು. ದ್ವಾರವತಿ ನೀರಿಲಿ ನೆರೆದಾಗ, ಕೃಷ್ಣನ ಹದಿನಾರುಸಾವಿರ ಸ್ತ್ರೀಯರಂ ಹೊಲೆಬೇಡರು ಸೆರೆಯನೊಯ್ದುದಕ್ಕಾಗಿ ಹೀನಜಾತಿಯ ಬಸುರಲ್ಲಿ ಉತ್ತಮಸ್ತ್ರೀಯರು ಹುಟ್ಟುವರೆಂದು ನಲಿದಾಡುವರು. ಮಹಾಲಕ್ಷ್ಮಿ ಸರ್ವರೊಡೆಯ ಶಿವನ ದಾಸಿಯೆಂದರೆ ಅಲಗು ತಾಕಿದಂತೆ ನೋವುತಿಹರು. ಶಿವಲಿಂಗವ ತಪಧ್ಯಾನದಿಂದರ್ಚಿಸಿ ಪೂಜಿಸಿ ಪಡೆದರು ಏಕಾದಶರುದ್ರರಾದಿಯಾದ ರುದ್ರಗಣಂಗಳು. ಬ್ರಹ್ಮವಿಷ್ಣುರುಗಳು ಇಂದ್ರಾದಿ ದಿಕ್ಪಾಲರು ರವಿಚಂದ್ರಾದಿಗಳು ಶಿವನ ಪೂಜಿಸಿ ಕಾಮಿತಫಲಪದವಿಯ ಪಡೆದರಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.