Index   ವಚನ - 305    Search  
 
ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ, ಗುರುಲಿಂಗಜಂಗಮವ ನಿಂದಿಸಿ ನುಡಿದವರ, ಬಾಯ ಸೀಳಿ ನಾಲಗೆಯ ಕಿತ್ತು ಕೊಲುವೆನು. ಅದೆಂತೆಂದಡೆ: ಯೋ ವಾಪ್ಯುತ್ಪಾಟಯೇಜ್ಜಿಹ್ವಾಂ ಶಿವನಿಂದಾರತಸ್ಯ ತು ತ್ರಿಸಪ್ತಕುಲಮುದ್ಧರೇತ್ ಶಿವಲೋಕೇ ಮಹೀಯತೇ ಎಂದುದಾಗಿ, ಮತ್ತಂ ಶಿವಭಕ್ತನಿಂದಯನು ಎನ್ನ ಕಿವಿಯಲ್ಲಿ ಕೇಳಿ, ಆ ನಿಂದಕರ ಕೊಲ್ಲುವೆನು, ಅಲ್ಲದಿರ್ದಡೆ ನಾನು ಸಾವೆನು. ಅದೆಂತೆಂದಡೆ: 'ಶ್ರುತ್ವಾ ನಿಂದಾಂ ಶಿವಸ್ಯಾಥ ತತ್‍ಕ್ಷಣಾದ್ದೇಹಮುತ್ಸೃ ಜೇತ್ ತಸ್ಯ ದೇಹನಿಹಂತಾ ಚೇತ್ ರುದ್ರಲೋಕಂ ಸ ಗಚ್ಛತಿ' ಎಂದುದಾಗಿ, ಇದನರಿತು ಶಿವನಿಂದಕರ ಸಂಹರಿಸಿದಲ್ಲದೆ ಎನಗೆ ಸಂತೋಷವಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.