ಸತ್ಯಸಹಜ ನಿತ್ಯ ಉತ್ತಮ ವಸ್ತು,
ನಿಜತತ್ವವೆನಿಸುವ ಶಿವನು ಒಂದೇ ವಸ್ತು.
ವೇದ, ಶಾಸ್ತ್ರ, ಪುರಾಣ, ಆಗಮ,
ಅಷ್ಟಾದಶ ವಿದ್ಯೆಂಗಳು ವಾದಿಸಲು,
ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು.
ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ.
ಇದನರಿದು ನಿಶ್ಚೈಸುವ ವಿವೇಕವುಳ್ಳ
ಮನ ಅಂದೂ ಇಂದೂ ಒಂದೇ.
ಇದನೆಂತೂ ನೀವೇ ಬಲ್ಲರಿ.
ಈ ಒಂದೊಂದರಲ್ಲೆ ಒಂದೊಂದ
ಮಾಡಲು ಒಂದಲ್ಲದೆ ಮತ್ತೊಂದಿಲ್ಲ.
ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ.
ಅವಂಗೆ ಅಧೋಗತಿ, ಅವನಜ್ಞಾನಿ.
ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Satyasahaja nitya uttama vastu,
nijatatvavenisuva śivanu ondē vastu.
Vēda, śāstra, purāṇa, āgama,
aṣṭādaśa vidyeṅgaḷu vādisalu,
andū indū śivatatva ondē vastuvendu nirdharisuvavu.
Sakala niḥkaladoḷage uttamōttama vastuvondē.
Idanaridu niścaisuva vivēkavuḷḷa
mana andū indū ondē.
Idanentū nīvē ballari.
Ī ondondaralle ondonda
māḍalu ondallade mattondilla.
Idallade innonduṇṭembavaṅge eraḍallade ondilla.
Avaṅge adhōgati, avanajñāni.
Ondendaridavaṅge jñānavide, bhaktiyide, muktiyide
uriliṅgapeddipriya viśvēśvarā.