Index   ವಚನ - 353    Search  
 
ಹರನೆ, ನಿಮ್ಮನು ದುಷ್ಟನಿಗ್ರಹ ಶಿಷ್ಟಪರಿಪಾಲನವಿಚಕ್ಷಣನೆಂದೆಂಬರು. ನಿಮಗೆ ಅಹಂಕರಿಸಿದ ಬ್ರಹ್ಮವಿಷ್ಣುದಕ್ಷಾದಿಗಳ ಶಿಕ್ಷಿಸಿದಿರಿ. ನಿಮಗೆರಗದೆ ದುರ್ವೃತ್ತಿಯಿಂದ ನಡೆದ ಗಜಾಸುರ ವ್ಯಾಘ್ರಾಸುರ ಗುಹ್ಯಾಸುರರುಗಳ ಕೊಂದು ಕಳೆದಿರಿ. ಇದನರಿದು ಸ್ತೋತ್ರವ ಮಾಡಿದಡೆ ನೀವು ಕರುಣಿಸದೇ ಇಲ್ಲಯ್ಯ. ಇಂತಹ ಕರ್ತರಿನ್ನುಂಟೆ? ನಿಮ್ಮಂತಹ ಬಲಿಷ್ಠರುಗಳೆಲ್ಲರ ಶಿಕ್ಷಿಸಿದಿರಿ. ಎನ್ನ ಮನವ ಶಿಕ್ಷಿಸಲಾರೆ. ಶಿವಶಿವಾ, ನಿಮ್ಮಿಂದ ಎನ್ನ ಮನ ಸಾಮರ್ಥ್ಯವುಳ್ಳುದು. ಎನ್ನಿಂದ ನೀವು ಸಮರ್ಥರಿಲ್ಲದಡೆ, ಶಿವಭಕ್ತ ಅಪರಾಧಿಗಳ ಶಿಕ್ಷಿಸುವಂತಹ ಇರಿಭಕ್ತ ಕಾಲಾಗ್ನಿರುದ್ರ ಮಡಿವಾಳ ಮಾಚಯ್ಯಂಗೆ ಮೊರೆಯಿಟ್ಟು ಕಳೆವೆನು. ಶಿವಧೋ ಎನ್ನ ಮೊರೆಯ ಕೇಳಿರಣ್ಣಾ. ಹರನೇ ನೀನು ದುಷ್ಟನಿಗ್ರಹ ಶಿಷ್ಟಪರಿಪಾಲಕನೆಂಬ ಬಿರುದ ಬಿಟ್ಟು ಕಳೆ. ಬಳಿಕ ನಾ ನಿಮ್ಮ ವರದಹಸ್ತನೆಂಬೆ, ಶಶಿಧರನೆಂಬೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂಬೆ.