Index   ವಚನ - 354    Search  
 
ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾದಿಯಾದ ತನುಗುಣಂಗಳು ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ? ತನುಗುಣಂಗಳು ಭೂತದೇಹಿಗಳಂತಾದಡೆ ಲಿಂಗದೇಹಿಕನೆಂಬ ಪರಿಯೆಂತಯ್ಯಾ? ಲಿಂಗಚಿಹ್ನೆವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ? ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ. ಕ್ರೋಧ ಲೋಭ ಮೋಹ ಮದ ಮತ್ಸರ ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ. ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ, ಲಿಂಗವಂತರು ನಗುವರಯ್ಯಾ. ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ ತನು ಮನ ಧನ ಲೀಯವಾದಡೆ ಆತನು ಸರ್ವಾಂಗಲಿಂಗಿಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.