Index   ವಚನ - 371    Search  
 
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು; ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು; ನವನಾಥಸಿದ್ಧರ ತೊತ್ತಳದುಳಿಯಿತ್ತು; ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು; ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು; ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು; ಕಾಮನ ಅರೆಯ ಮೆಟ್ಟಿ ಕೂಗಿತ್ತು; ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು; ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು; ಭಾವಸೋಂಕನುಂಡು ಕೊಕ್ಕರನಾಯಿತ್ತು. ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ, ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ, ಲಿಂಗೈಕ್ಯ ತಾನೆ ಪ್ರಾಣ ಪುರುಷ. ಇದನರಿದು ನುಂಗಿದಾತನೆ ಪರಮಶಿವಯೋಗಿ: ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವದ ಭೇದವರಿಯದ! ಇದು ಕಾರಣ ಗುಹೇಶ್ವರಾ. ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.