ಅಡವಿಯ ತೊಪ್ಪಲ ತರತರ ತಂದು ತಿಂದು
ಒಡಲ ದಂಡಿಸಿಕೊಂಡು,
ಪಡೆ, ಗವಿಯೊಳಗೆ ತಪಸ್ಸಿದ್ದೇವೆಯೆಂದು
ಕಡು ಹೆಮ್ಮೆಯಲ್ಲಿ ನುಡಿವ ಅಣ್ಣಗಳು ನೀವು ಕೇಳಿರೋ.
ಷಡುರಸಂಗಳು ಹುಟ್ಟಿದವು ಶಿವನ ಕರುಣರಸದಲ್ಲಿ,
ಆ ರುಚಿಗಳ ಸುಖಮಂ ಪಡೆದವುದಕ್ಕೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥವ ಹಿಡಿದ ಭಕ್ತನ ಮನೆಯಲ್ಲಿ
ಗುರುಲಿಂಗಜಂಗಮಕ್ಕೆ ನೀಡಿ ಮಾಡುವ
ಭಕ್ತಿಪದಾರ್ಥವಾದ ಷಡುರುಚಿಯ ಕೊಂಬುದಕ್ಕೆ
ನಿಮ್ಮಲ್ಲಿಯೆ ಷಡ್ವಿಧಲಿಂಗಂಗಳುಂಟು.
ಅವ ನೋಡಿ ಎಚ್ಚತ್ತು ಸವಿಸವಿದರ್ಪಿಸಬಲ್ಲಡೆ ಮಹಾಮಹಿಮ,
ತಾನೇನ ಮಾಡಲು ಜಡನಲ್ಲ, ಅಜಡನು ತಾನೆಂದಾತನಂಬಿಗರ ಚೌಡಯ್ಯ.