Index   ವಚನ - 72    Search  
 
ಒಬ್ಬ ತಂದೆಯ ಬಸಿರಿನಲ್ಲಿ ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ? ಅವರೊಳಗೊಬ್ಬಾತಂಗೆ ಸೆರಗ ಕಟ್ಟಿ ಮದುವೆಯ ಮಾಡಿದ ಬಳಿಕ, ಆತಂಗೆ ತನ್ನಂಗದ ಸುಖವನೊಪ್ಪಿಸಬೇಕಲ್ಲದೆ, ಉಳಿದಿರ್ದವರೆಲ್ಲ ತನ್ನ ಮಾವನ ಮಕ್ಕಳೆಂದು ಅವರಿಗೆ ಸೆರಗು ಹಾಸುವವಳನು ಒಪ್ಪುವರೆ ಲೋಕದೊಳು? ಪರಮಾತ್ಮನೆಂಬ ಶಿವನಿಗೆ ಆಶ್ರಯವಾಗಿ ಹುಟ್ಟಿತ್ತು ಲಿಂಗ, ಆತಂಗೆ ವಾಹನವಾಗಿ ಹುಟ್ಟಿದಾತ ವೃಷಭ, ಆತಂಗೆ ಯೋಗವಾಗಿ ಹುಟ್ಟಿದಾತ ವಿನಾಯಕ, ಆತಂಗೆ ಯುದ್ಧಕ್ಕೆ ಸರಿಯಾಗಿ ಹುಟ್ಟಿದಾತ ವೀರಭದ್ರ. ಇಂತಿವರೆಲ್ಲ ಶಿವನ ಮಕ್ಕಳಾದರೆ, ತನಗೊಂದು ಪ್ರಾಣಲಿಂಗವೆಂದು ಕಂಕಣ ಕಟ್ಟಿ, ಕರಸ್ಥಲಕ್ಕೆ ಬಂದ ಬಳಿಕ ಅದನು ನಂಬಲರಿಯದೆ ಮತ್ತನ್ಯದೈವಕ್ಕೆರಗಿದಡೆ ನಾಯಕನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ.