ಓಂಕಾರವೆಂಬಾಕಾರದಲ್ಲಿ ನಾಲ್ಕು ವೇದ,
ನಾಲ್ಕು ವೇದದಲ್ಲಿ ಇಪ್ಪತ್ತೆಂಟಾಗಮ,
ಇಪ್ಪತ್ತೆಂಟಾಗಮದಲ್ಲಿ ಹದಿನೆಂಟು ಪುರಾಣ,
ಹದಿನೆಂಟು ಪುರಾಣದಲ್ಲಿ ಹದಿನಾರು ಶಾಸ್ತ್ರವಡಗಿದವು.
ಆ ಶಾಸ್ತ್ರದ ಕೊನೆಯ ಮೊನೆಯ ಮೇಲಿಪ್ಪ
ಷಡ್ದರ್ಶನದ ಕಹಿಯ ಬೇರ ಹಿಡಿದು,
ವೀರಶೈವನೆಂಬ ಸಿದ್ಧನು ಕೀಳುವಾಗ,
ಕಾಯಯ್ಯ ಎಂದು ಬಾಯ ಬಿಟ್ಟವು.
ಅವಕ್ಕೆ ಕರುಣಿಸಿ ಬಿಟ್ಟಾತನಂಬಿಗರ ಚೌಡಯ್ಯ.