Index   ವಚನ - 99    Search  
 
ಕಾಶಿಯಾತ್ರೆಗೆ ಹೋದೆನೆಂಬ ಹೇಸಿಮೂಳರ ಮಾತ ಕೇಳಲಾಗದು! ಕೇತಾರಕ್ಕೆ ಹೋದೆನೆಂಬ ಹೇಸಿಹೀನರ ನುಡಿಯ ಲಾಲಿಸಲಾಗದು! ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ ಸರ್ವಹೀನರ ಮುಖವ ನೋಡಲಾಗದು! ಪರ್ವತಕ್ಕೆ ಹೋದೆನೆಂಬ ಪಂಚಮಹಾಪಾತಕರ ಮುಖವ ನೋಡಲಾಗದು! ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ, ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ, ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ. ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ ಮುಳುಗಿ, ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು, ಮೀಸೆಯ ತರಿಸಿಕೊಂಡು, ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ, ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು, ಪಾಪ ಹೋಯಿತ್ತೆಂದು, ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು, ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ. ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ, ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ, ಇದಿರುಗೊಂಡು ಕರತರುವುದಕ್ಕೆ! ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ, ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ? ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ? ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ ನಮ್ಮ ದಿಟ್ಟವೀರಾಧಿವೀರನಂಬಿಗರ ಚೌಡಯ್ಯನು.