ಹುಟ್ಟಿದ ಕೂಸಿಂಗೆ ಪಟ್ಟವ ಕಟ್ಟಿ, ವಿಭೂತಿಯ ಹೂಸಿ,
ಲಿಂಗವ ತೋರಿ-`ಜೋಜೋ' ಎಂದು
ಜೋಗುಳವಾಡಿದಳು ಮಾಯಾದೇವಿಯಕ್ಕ!
`ಜೋಜೋ' ಎಂಬ ಸರ ಹರಿದು ತೊಟ್ಟಿಲು ಬಿದ್ದಿತ್ತು,
ಕೂಸು ಸತ್ತಿತ್ತು; ಗುಹೇಶ್ವರನುಳಿದನು!
Hindi Translationपैदा हुए शिशु को दीक्षा देकर ,
विभूति लेपकर, लिंग दिखाकर
जोजो लोरी गायी मायादेवी अक्का ने।
जोजो नामक माला टूटकर पालना गिरा ,
शिशु मरा, गुहेश्वर बचा।
Translated by: Eswara Sharma M and Govindarao B N
English Translation
Tamil Translationபிறந்த குழந்தைக்குப் பட்டத்தைக் கட்டி
திருநீற்றினைப் பூசி, இலிங்கத்தைக் காட்டி
ஜோ, ஜோ எனத் தாலாட்டினாள் மாயாதேவி அக்கா
ஜோ, ஜோ எனும் குரல் நின்று தொட்டில் விழுந்தது.
குழந்தை மடிந்தது, குஹேசுவரன் எஞ்சினன்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಕೂಸು ಸತ್ತಿತ್ತು = ಆ ಮನದೊಳಗಿದ್ದ ಜೀವಭಾವ ಕೆಟ್ಟಿತ್ತು; ಗುಹೇಶ್ವರನುಳಿದನು = ಆತ್ಮಚೈತನ್ಯವೊಂದೇ ಉಳಿಯಿತು; ಜೋ ಜೋ ಎಂದು ಜೋಗುಳವಾ = ಲಿಂಗಶಬ್ದ ನಿರ್ದೇಶಿತವಾದ ಆ ಶಿವಚೈತನ್ಯವೇ ನಾನು-ಎಂಬರ್ಥದ ಮಹಾಮಂತ್ರವನ್ನು ಉಚ್ಚರಿಸಿ ಬೋಧಿಸಿದನು; ತೊಟ್ಟಿಲು ಬಿದ್ದತ್ತು = ಮನಸ್ಸು ಅಮನವಾಯಿತ್ತು; ಪಟ್ಟವ ಕಟ್ಟು = ದೀಕ್ಷೆ ನೀಡಿ, ಸಾಧನಾಪಥದಲಿ ನೆಲೆಗೊಳಿಸಿ; ಮಾಯಾದೇವಿಯಕ್ಕ = ಮಾಯೆ ಎಂದರೆ ಶುದ್ದಮಾಯೆ, ತನ್ನ ಆಶ್ರಯವಾದ ಶಿವಚೈತನ್ಯವನು ಅಭಿವ್ಯಕ್ತಗೊಳಿಸುವ ವಿಮರ್ಶಾಶಕ್ತಿ; ಲಿಂಗವ ತೋರಿ = ಸರ್ವಾಧಾರ ಚೈತನ್ಯವೆ ಶಾಶ್ವತವಾದ ಸತ್ಯ ಎಂಬುದನ್ನು ಬೋಧಿಸಿ, ಮನಗಾಣಿಸಿ; ವಿಭೂತಿಯ ಹೂಸಿ = ಅನಾತ್ಮ ಪ್ರಪಂಚವೆಲ್ಲ ನಶ್ವರ ಎಂಬ ತಿಳಿವನ್ನು ಕೊಟ್ಟು; ಸರ = ಸ್ವರ, ಶಿವೋsಹಂ ಎಂಬ ಅವ್ಯಾಹತ ಅನುಸಂಧಾನ ; ಹರಿದು = ನಿಂತು; ಹುಟ್ಟಿದ ಕೂಸು = ಅಂತಃಕರಣದಲ್ಲಿ ಆವತರಿಸಿದ ಆತ್ಮಚೈತನ್ಯ, ಅದು ಜೀವ, ಅಂತಃಕರಣವೆ ತೊಟ್ಟಿಲು.; Written by: Sri Siddeswara Swamiji, Vijayapura