Index   ವಚನ - 126    Search  
 
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ, ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು. ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ, ಊರ್ಧ್ವಮುಖವಾಗಿ ತಿರುಗಾಡುತ್ತಿಹುದು. ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ, ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು. ಮೇಲಣ ಮೂರು ಬಾಗಿಲು ಊರ್ಧ್ವದ ತ್ರಿಗುಣದ ಸರ್ಪ ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ, ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು, ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು, ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು. ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು, ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು. ಕರ್ಮದ ಒಳಗಾದ ಜ್ಞಾನ ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ.