Index   ವಚನ - 87    Search  
 
ವಿರಕ್ತಂಗೆ ವಿಷಯವುಂಟೆ? ಶರಣಂಗೆ ತಥ್ಯಮಿಥ್ಯವುಂಟೆ? ಮಹದೊಡಗೂಡಿ ಮಾಹಾತ್ಮೆಯನಳಿದವಂಗೆ ಗಾಂಭೀರ ಗರ್ವಕ್ಕೆ ಎಡೆದೆರಹುಂಟೆ? ಆತನಿರವು ದಗ್ಧಪಟದಂತೆ, ದಹ್ಯದಲ್ಲಿ ನೊಂದ ರಜ್ಜುವಿನ ತೆರದಂತೆ, ನಿರವಯದಲ್ಲಿ ತೋರಿ ತೋರುವ ಮರೀಚಿಕಾಜಲದ ತೆರೆಯ ಹೊಳಹಿನ ವಳಿಯಂತೆ. ರೂಪಿಂಗೆ ದೃಷ್ಟವಾಗಿ ಹಿಡಿವೆಡೆಯಲ್ಲಿ ಅಡಿಯಿಲ್ಲದೆ ವಸ್ತುವನೊಡಗೂಡಬೇಕು. ಆತ ಹಿಡಿದುದು ಹಿಡಿಕೆಯಲ್ಲ, ಮುಟ್ಟಿಂಗೊಳಗಲ್ಲ. ಅಂಬರದ ವರ್ಣ ಎವೆ ಹಳಚುವುದಕ್ಕೆ ಮುನ್ನವೆ ಛಂದವಳಿದಂತೆ. ಇದು ಲಿಂಗಾಂಗಿಯ ಮುಟ್ಟು, ಸರ್ವಗುಣ ಸಂಪನ್ನನ ತೊಟ್ಟು, ದಿವ್ಯಜ್ಞಾನಿಯ ತಟ್ಟು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.