Index   ವಚನ - 90    Search  
 
ಷಡ್ಭಾವಲಿಂಗ ಷಡುವರ್ಣಭೇದ, ಷಡುಸ್ಥಲಕ್ರೀ, ಷಟ್ಕರ್ಮಯುಕ್ತಿ, ಇಂತೀ ಸ್ಥಲವಿವರಂಗಳೆಲ್ಲವೂ ಪರವಸ್ತುವಿನ ಮೂಲಾಂಕುರ ಲಿಂಗಮೂರ್ತಿ. ಆ ವಸ್ತು ತ್ರಿಗುಣಾತ್ಮಕವಾಗಿ ತ್ರಿವಿಧಲಿಂಗ ಸ್ವರೂಪದಿಂದ, ಉಭಯವ ಕೂಡಿಕೊಂಡು ಉಮಾಮಹೇಶ್ವರತ್ತ್ವದಿಂದ, ಭಕ್ತಿ ಕಾರಣನಾಗಿ ತತ್ತ್ವಂಗಳ ಗರ್ಭೀಕರಿಸಿಕೊಂಡು ಗೊತ್ತನಿಟ್ಟು ಸ್ಥಲಂಗಳ ವ್ಯಕ್ತೀಕರಿಸಿ ಆರಾರ ವಿಶ್ವಾಸಂಗಳಲ್ಲಿ ಮನೋಮೂರ್ತಿಯಾಗಿ ಗುರುವಿಂಗೆ ಇಹಪರವೆಂಬ ಉಭಯವನರಿಪಿ, ಲಿಂಗಕ್ಕೆ ಕಳಾಸ್ವರೂಪವೆಂಬ ಕಳೆಯನಿಂಬಿಟ್ಟು, ಜಂಗಮಕ್ಕೆ ಪರಮ ನಿರ್ವಾಣವೆಂಬ ಪರಮಪದಮಂ ಲಕ್ಷಿಸಿ, ಸ್ಥಲಕ್ಕೆ ಸ್ಥಲಜ್ಞನಾಗಿ, ನಿಸ್ಥಲಕ್ಕೆ ಪರಿಪೂರ್ಣನಾಗಿ, ಇಂತೀ ಇದಿರೆಡೆಯಿಲ್ಲದ ವಸ್ತು ನೀನಲ್ಲಾ. ಶಂಭುವಿನಿಂದಿತ್ತ ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.