Index   ವಚನ - 83    Search  
 
ಮಾಧವನ ಮನೆಯ ಬಾಗಿಲಿನಲ್ಲಿ ಮಹಾಜನಂಗಳೆಲ್ಲರು ಕೂಡಿ ಹೋಮವನಿಕ್ಕಲಾಗಿ, ಎದ್ದಿತ್ತು ಉರಿ. ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿ ನಾಲ್ವರ ಕಣ್ಣು ಕೆಟ್ಟಿತ್ತು. ಆ ಹೋಮದ ದಿಕ್ಕಿನ ಕುಂಭ ಉರುಗಿಹೋಗಲಾಗಿ ತೊರೆ ಹರಿಯಿತ್ತು. ಕಾಲ ಕಡಹು ಆರಿಗೂ ಆಗದು. ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು. ಮಡುವಿನ ಮೊಸಳೆ ತಡಿಯಲ್ಲಿ ಆರನೂ ನಿಲಲೀಸದೆ ಕಡಿದು ನುಂಗಿಹುದಿನ್ನೇವೆ. ಮೊಸಳೆಯ ಹಿಡಿವರ ಕಾಣೆ, ಮಡುವ ಒಡೆವರ ಕಾಣೆ, ಹೋಮವ ಕೆಡಿಸುವರ ಕಾಣೆ, ಮಾಧವನ ಬಾಗಿಲಿನಲ್ಲಿ ನಿಂದು ಹೋದರು ಹೊಲಬುದಪ್ಪಿ, ನಾರಾಯಣಪ್ರಿಯ ರಾಮನಾಥಾ.