Index   ವಚನ - 8    Search  
 
ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ, ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ, ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ, ಒಳಗೆ ಶುದ್ಧವಿಲ್ಲದೆ ಬರಿದೆ ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ ಅಷ್ಟಾವರಣ ಪರಿಚಾರವಿಲ್ಲ ನೋಡ! ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ ಸದ್ಗುರುಮುಖದಿಂ ಕೂಡಿ ಎರಡಳಿದು, ಆ ಲಿಂಗದ ಚಿಚ್ಚೈತನ್ಯವೆ ನಿರಂಜನ ಜಂಗಮವೆಂದು ಆ ಜಂಗಮವೆ ತಾನೆಂದರಿದು, ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ-ಲಾಂಛನ, ತನ್ನ ಪರಮಾನುಭಾವವೆ ಮಹಾಮಂತ್ರ, ತನ್ನ ನಿಜಾನಂದವೆ ಪಾದೋದಕ-ಪ್ರಸಾದ, ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ ! ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ ಬರಿದೆ ಅಹಂಕರಿಸಿ ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ, ಶಿವಪ್ರಸಾದಿಗಳೆಂದು ವಾಗದ್ವೈತವ ನುಡಿವವರಲ್ಲಿ ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ !