Index   ವಚನ - 10    Search  
 
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ ಮರ್ತ್ಯದ ಜಡಜೀವಿಭವಿಪ್ರಾಣಿಗಳ ಹಾಂಗೆ ಗುಹ್ಯಲಂಪಟಕಿಚ್ಛೈಸಿ ದಾಸಿ ವೇಶಿ ಸೂಳೆ ರಂಡೆ ತೊತ್ತು ಗೌಡಿಯರ ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ, ಷಟ್ಸ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ! ಅವ್ವ ನೀಲವ್ವನ ಮೋಹದ ಮಗಳೆ! ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]! ನಿಷ್ಕಳಂಕ ಸದ್ಗುರು ಪ್ರಭುದೇವರ ಸತ್ಯದ ಸೊಸೆಯೆ! ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ! ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ! ಎನ್ನಕ್ಕ ಮಹಾದೇವಿ ಕೇಳವ್ವ! ಮರ್ತ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ!