Index   ವಚನ - 99    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು ಪಂಚ ಮಹಾಭೂತಂಗಳು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬಿವು ಪಂಚಪ್ರಾಣವಾಯುಗಳು. ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬಿವು ಪಂಚಕರ್ಮೇಂದ್ರಿಯಂಗಳು. ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬಿವು ಪಂಚಜ್ಞಾನೇಂದ್ರಿಯಂಗಳು. ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ಅಂತಃಕರಣ ಚತುಷ್ಟಯಂಗಳು. ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ದೇಹವಾಯಿತ್ತು. ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ| ಚತುರ್ವಿಂಶತಿದೇಹಾನಿ ಸಾಂಖ್ಯಾಶಾಸ್ತ್ರವಿದೋ ವಿದುಃ|| ಎಂದುದಾಗಿ, ಇಂತೀ ಇಪ್ಪತ್ತನಾಲ್ಕು ತತ್ತ್ವಂಗಳು ಕೂಡಿ ಚೇಷ್ಟಿಸುವಾತನೇ ಜೀವಾತ್ಮನು. ಅದೆಂತೆಂದಡೆ: ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ| ಆತ್ಮಾ ಷಡ್ವಿಂಶಕಶೈವ ಪರಾತ್ಮಾ ಸಪ್ತವಿಂಶಕಃ|| ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ| ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್ ಇಂತೆಂದುದಾಗಿ ಇಂತೀ ಪಂಚವಿಂಶತಿ ತತ್ತ್ವಂಗಳುತ್ಪತ್ತಿಯು ನಿಮ್ಮ ನೆನಹುಮಾತ್ರದಿಂದಾದವಾಗಿ ಇವರ ಗುಣಧರ್ಮಕರ್ಮಂಗಳು ನಿಮಗಿಲ್ಲ ನೋಡಾ, ಸಿಮ್ಮಲಿಗೆಯ ಚೆನ್ನರಾಮಾ.