Index   ವಚನ - 29    Search  
 
ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಡ್ದರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತಿಭೇದ ಶಿವಾಧಿಕ್ಯ, ಉಭಯ ಚೇತನ ವಸ್ತುವಾಗಿ ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ. ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ. ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ. ಏಕಾಕ್ಷರದ ಲೇಖನವಳಿದ ಅಲೇಖ. ಅಯಿವತ್ತೆರಡನೆಯ ಸರಹರಿದ ಸಂಬಂಧ. ಇದು ಸ್ವಯ ಚರ ಪರದ ಸುಮುದ್ರೆ. ಶ್ರುತಿಸ್ಮೃತಿತತ್ವದ ಶೋಧನೆ. ಆ ಗುಣ ಪ್ರಸನ್ನವಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ.