Index   ವಚನ - 4    Search  
 
ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ. ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು. ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬವರೆಲ್ಲ ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿಕೊಂಬ ಬಡಿಹೋರಿಗಳು. ಇಂತೀ ವಿಶ್ವಗೋಧರೆಲ್ಲರೂ ಕರ್ತಾರನ ಕರ್ಮಟದ ನಕ್ಕುಬಚ್ಚನೆಯ ಚಿಕ್ಕಮಕ್ಕಳು. ಇಂತಿವನರಿದು ಕಾಮದಲ್ಲಿ ಕರಗದೆ, ಕ್ರೋಧದ ದಳ್ಳುರಿಯಲ್ಲಿ ಬೇಯದೆ, ನಾನಾ ವ್ಯಾಮೋಹ ಋತುಕಾಲಂಗಳ ಕಾಹಿನ ಬಲೆಗೊಳಗಾಗುತ್ತ ಮತ್ತೆ ಸಾವಧಾನವೆ, ಮತ್ತೆಯೂ ಜ್ಞಾನಾತೀತವೆ ? ಮತ್ತೆ ಧ್ಯಾನಮೂರ್ತಿಯೆ, ಮತ್ತೆ ನಾನಾ ಕ್ರೀಯಲ್ಲಿ ಭಾವ ವ್ಯವಧಾನವೆ ? ಮತ್ತೆ ಗುರು ಚರ ಪರವೆ, ಒಕ್ಕುಡಿತೆ ನೀರಿನಲ್ಲಿ ತಾ ಸತ್ತ ಮತ್ತೆ ಸಮುದ್ರವೆಷ್ಟಾಳವಾದಡೇನು ? ಕಿಂಚಿತ್ತು ಸುಖದಲ್ಲಿ ಲಿಂಗವ ಬಿಟ್ಟು, ಅಂಗನೆಯರುರಸ್ಥಲದಲ್ಲಿ ಅಂಗೀಕರಿಸಿ ಅವರಧರ ಪಾನಂಗಳ ಮಾಡಿ, ನಾ ಲಿಂಗಾಂಗಿಯೆಂದಡೆ ಸರ್ವಸಂಗಪರಿತ್ಯಾಗವ ಮಾಡಿದ ಲಿಂಗಾಂಗಿಗಳೊಪ್ಪರು. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಸ್ವಪ್ನದಲ್ಲಿ ಕುರುಹುಗಾಣಿಸಿಕೊಳ್ಳಾ.