ನಿರಾಳದೊಳಗಣ ಲಿಂಗದ ನೆಲೆ ಹೇಂಗೆ ಇದ್ದಿತ್ತು ಎಂದಡೆ:
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಅಂಡವುಂಟು.
ಆ ಅಂಡದೊಳಗೆ ಅಮೃತ ಸರೋದಯವೆಂಬ ಅಷ್ಟದಳಕಮಲವುಂಟು.
ಆ ಕಮಲದಲ್ಲಿ ನಾಲ್ಕಾರು ಮಾಣಿಕ್ಯದ ಕಂಬವುಂಟು.
ಆ ನಟ್ಟನಡುವಣ ನಾಲ್ಕುಮಾಣಿಕ್ಯದ ಕಂಬಕ್ಕೆ
ನಾಲ್ಕು ನವರತ್ನದ ಬೋದಿಗೆಯುಂಟು.
ನಾದವೆಂಬ ನಾಲ್ಕು ಲೋವೆ ನಡುವೆ
ಸೋಮಸೂರ್ಯರೆಂಬೆರಡು ಹಲಗೆಯ ಹರಹಿ,
ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶವೆಂಬ
ಪಂಚರತ್ನದ ಹೃತ್ಕಮಲಕರ್ಣಿಕಾಕಮಲಮಧ್ಯದಲ್ಲಿ ರವೆಯ ಸುತ್ತು ಮುಚ್ಚಿ,
ಅಲ್ಲಿಪ್ಪ ಲಿಂಗಕ್ಕೆ ತನುತ್ರಯ ಜ್ಯೋತಿಯ ಮಾಡಿ
ನಿಮ್ಮ ಶರಣರ ಕಾಯವೇ ಕೈಲಾಸ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ.