Index   ವಚನ - 18    Search  
 
ನಿಶ್ಚಿಂತ ನಿರ್ಲೇಪ ಸಚ್ಚಿದಾನಂದ ಸ್ವರೂಪವಪ್ಪ ಶರಣನ ಲಿಂಗದಂಗವ ತೋರಯ್ಯ ಎಂದಡೆ ಶರಣ. ಶರಣರಿಗೆ ಬಿನ್ನಹಂ ಮಾಡುತ್ತಿರ್ದ, ನಿಮ್ಮ ಶರಣ ನಿಜಲಿಂಗದ ಕ್ರಮವ. ಭುವನಾಶ್ರಯವೆಂಬುದೊಂದು ಪದ್ಮಸಿಂಹಾಸನದ ಮೇಲೆ ಮಾಣಿಕ್ಯವರ್ಣದ ಲಿಂಗವುಂಟು. ಆ ಲಿಂಗವು ತನ್ನ ನಿಜಾಶ್ರಯವ ನೋಡುತ್ತಿರಲು ಅಲ್ಲಿ ಚಿದಂಗವೆಂಬ ಮಹಾಹೃತ್ಕಮಲದೊಳಗೆ ಉನ್ಮನಿಯಸ್ಥಾನವೆಂಬುದೊಂದು [ಉಂಟು]. ಬ್ರಹ್ಮಾನಂದಮಯವೆನಿಪ ನಿಜಾಮೃತಪಾನೀಯವೆಂಬ ಪಂಚರತ್ನದ ಕಳಸವುಂಟು. ಆ ಪಂಚರತ್ನದ ಕಳಸದ ಮೇಲೆ ಇಂಚರನೆಂಬ ಹಂಸನೆಂಬ ಪ್ರಾಣಲಿಂಗವು ಆತ್ಮಪ್ರಭಾಮಂಡಲದೊಳಗಿಹುದು. ಮಹಾಪ್ರಭೆಯಂ ನುಂಗಿದ ಲಿಂಗವು ಪದ್ಮಬ್ರಹ್ಮಾಂಡವೆಂಬುದೊಂದು ಆ ಲಯಸ್ಥಾನದಲ್ಲಿ ನೋಡುತ್ತಿರಲು ಅಲ್ಲಿಂದತ್ತ ಬಟ್ಟಬಯಲಾದ ಅಗಮ್ಯವೆಂಬ ಬಯಲು, ಆ ಲಿಂಗದೊಳಗಡಗಿ ನಿಂದ ಭಾವವು ತನ್ನೊಳು ತಾನೆ ಕಾಣಿಸಿತ್ತು. ಅದ ಚೆನ್ನಾಗಿ ತಿಳಿಯಬಲ್ಲಡೆ ಇನ್ನೇಕಯ್ಯಾ ಶಂಕೆ ? ನಿಃಕಳಂಕ ನಿಜಲಿಂಗವು ತಾನೆ ಎಂದಾತ, ನಮ್ಮ ಬಸವಣ್ಣಪ್ರಿಯವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾಗಿ ಇದ್ದಿತ್ತು.