Index   ವಚನ - 20    Search  
 
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇಂತೀ ಷಡುಸ್ಥಲಚಕ್ರವರ್ತಿಯಯ್ಯಾ ನಮ್ಮ ಚನ್ನಬಸವಣ್ಣನು. ಷಡಕ್ಷರಂ ಸರ್ವಮಂತ್ರಂ ಸರ್ವಾಂಚಾರಂ ಚ ಲಿಂಗಯೋ ಷಡ್ವರ್ಗಂ ತ್ರಿವಿಧ ಏಕಂ ತಸ್ಮಾತ್ ಲಿಂಗಂತು ಪೂಜನಂ|| ಇಂತೆಂದುದಾಗಿ, ಆಚಾರವೆ ಕಾಯ, ಆಚಾರವೆ ಪ್ರಾಣ, ಆಚಾರವೆ ಅಂಗ, ಆಚಾರವೆ ಲಿಂಗ, ಆಚಾರವೆ ಸಂಗ. ಇಂತಪ್ಪ ಆಚಾರಕ್ಕೆ ಆಚಾರವೆ ಪ್ರಾಣವಾಗಿರಬಲ್ಲನಲ್ಲಯ್ಯಾ ನಮ್ಮ ಚನ್ನಬಸವಣ್ಣನು. ಶುದ್ಧಸಿದ್ಧ ಪ್ರಸಿದ್ಧ ಪ್ರಭುವೆ ಪ್ರಸನ್ನ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಚನ್ನಬಸವಣ್ಣನು ಸರ್ವಾಚಾರ ಸಂಗಸಂಪನ್ನನು. ಇಂತಪ್ಪ ಚೆನ್ನಬಸವಣ್ಣನ ನಿಲವ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.