Index   ವಚನ - 9    Search  
 
ರತ್ನದ ಕಾಂತಿಯ ಕಳೆಯಿಂದ, ತನ್ನಂಗದಲ್ಲಿ ಹುಟ್ಟಿದ ಜಜ್ಜರಿ ಕಾಣಿಸಿಕೊಂಬಂತೆ. ಚಂದ್ರನ ಕಳಂಕು ತನ್ನ ಪರಿಪೂರ್ಣದ ಬೆಳಗಿನ ಕಳೆಯಿಂದ, ತನ್ನಲ್ಲಿಯೆ ಕಲೆ ಕಾಳಿಕವ ಕಾಣಿಸಿಕೊಂಬಂತೆ, ಇಂತೀ ಸುವಸ್ತು ವಸ್ತುಕದಲ್ಲಿ ವಿಸ್ತರಿಸಲಾಗಿ, ಪರಮ ಜೀವನಾದುದ ತಿಳಿದು ನೋಡಿಕೊಳ್ಳಿ. ಗೆಲ್ಲಸೋಲದ ಮಾತಲ್ಲ. ಆಗಮದ ಮಾತಿನ ಮಾಲೆಯ ನೀತಿಯಲ್ಲ. ಬೆಂಕಿ ಕೆಟ್ಟಡೆ, ಉರುಹಿದಡೆ ಹೊತ್ತುವುದಲ್ಲದೆ ದೀಪ ಕೆಟ್ಟಡೆ ಮತ್ತೆ ಉರುಹಿದಡೆ ಹೊತ್ತಿದುದುಂಟೆ ? ಕ್ರೀವಂತ ಮರದಡೆ ಅರಿವನಲ್ಲದೆ, ಮರೆದರಿದವ ಮತ್ತೆ ಮರೆದಡೆ ಮತ್ತರಿಯಬಲ್ಲುದೆ ಬೆಳಗದ ಕಂಚು, ತೊಳೆಯದ ಕುಂಭ,ಪಕ್ವಕ್ಕಳಿಯದ ಫಲ, ನೆರೆಯನರಿಯದವನ ಸತ್ಕ್ರಿಯಾ ಮಾಟ, ಬರುಕಟೆ ವ್ರಥಾಹೋಯಿತ್ತು. ಇಂತೀ ಗುಣವ ತಿಳಿದು ಅರಿದವರಲ್ಲಿ, ತಾನರಿದು ಕೂಡಬೇಕು, ಕೂಡಿಕೊಳ್ಳಬೇಕು. ಕೊಂಡು ಕೊಡಬೇಕು, ಕೊಟ್ಟೆನೆಂಬ ಎಡದೆರಪಿಲ್ಲದೆ, ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವ ಕೂಡಬೇಕು.