ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ,
ಎನ್ನ ಅಂಗಭಂಗ ಹಿಂಗಿದವಯ್ಯಾ.
ಅಯ್ಯಾ, ನಿಮ್ಮಾದ್ಯರ ವಚನ ಕೇಳಿ,
ಪ್ರಸಾದದ ಪರುಷವ ಕಂಡೆನಯ್ಯಾ.
ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ.
ಒಂದು ಜ್ಯೋತಿ ಕೆಂಪು ವರ್ಣ,
ಒಂದು ಜ್ಯೋತಿ ಹಳದಿ ವರ್ಣ,
ಒಂದು ಜ್ಯೋತಿ ಬಿಳಿಯ ವರ್ಣ.
ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ.
ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ.
ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ.
ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ,
ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ,
ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.