Index   ವಚನ - 69    Search  
 
ಅಸಿಯಾಗಲಿ ಮಸಿಯಾಗಲಿ ಕೃಷಿಯಾಗಲಿ ವಾಣಿಜ್ಯ ಮುಂತಾದ ಕೃಷಿಯ ಮಾಡುವಲ್ಲಿ, ಪಶುಪತಿಗೆಂದೇ ಪ್ರಮಾಣಿಸಿ ಭಕ್ತಿಯೆಸಕದಿಂದ, ಹಸಿವಿಲ್ಲದೆ ತೃಷೆಯಿಲ್ಲದೆ ವಿಷಯವನರಿಯದೆ, ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದೆ ಮಾಡುತಿರ್ಪ ಭಕ್ತನ ಅಂಗಣವೆ ವಾರಣಾಸಿ, ಆತನ ಆಶ್ರಯವೆ ಅವಿಮುಕ್ತ ಕ್ಷೇತ್ರ, ಆತನ ಮುಖವೆ ಮೋಕ್ಷದಾಗರ. ಆತನಂಗವೆ ಲಿಂಗದ ಬೆಳಗು, ಆತನ ಪಾದವೆ ಪವಿತ್ರ ಸುಧೆ. ಹೀಂಗೆ ತ್ರಿಕರಣ ಶುದ್ಧಾತ್ಮ ಭಕ್ತನಂತೆ ಒಕ್ಕುದ ಕಾಯ್ದುಕೊಂಡಿರ್ಪ ಕುಕ್ಕುಟನಂತೆ ಮಾಡಾ. ಎನಗಿದೇ ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.