Index   ವಚನ - 83    Search  
 
ಆತ್ಮನನರಿದೆಹೆವೆಂದು ಭೀಷ್ಮಿಸಿಕೊಂಡಿಪ್ಪ ಜಗದಾಟ ತ್ರಿವಿಧ ಕಾಟದ ನೀತಿವಂತರು ಕೇಳಿರೊ. ಆತ್ಮನ ಇರವು ಶ್ವೇತವೋ, ಹರೀತವೋ, ಕಪೋತವೋ, ಮಂಜಿಷ್ಠವೋ ? ಕೃಷ್ಣಗೌರವ ಗಾತ್ರಕ್ಕೆ ಮೊದಲಾದ ಬಣ್ಣದ ವರ್ಣವೋ ? ಇವೇಕೊ ? ಬಾಯಲ್ಲಿ ಆಡುವ ಮಾತಲ್ಲದೆ, ಭಾವಜ್ಞರನಾರನೂ ಕಾಣೆ. ಆತ್ಮನ ಕಂಡವನ ಇರವು ಮುಕುರದೊಳಗಣ ಪ್ರತಿಬಿಂಬದಂತೆ, ಶ್ರುತಿಯೊಳಗಡಗಿದ ಗತಿ ನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ. ಇದರ ಎಸಕದ ಕುರುಹನರಿದವ ನೀನೋ, ಆತ್ಮನೋ ? ಇದನೇನೆಂದು ಅರಿಯೆ. ಭಾವಭ್ರಮೆಗೆ ದೂರ ಜ್ಞಾನನಿರ್ಲೇಪ, ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ