Index   ವಚನ - 93    Search  
 
ಆ ಮಹಾಂತಿನ ಘನವೆಂತೆಂದಡೆ, ಹೇಳಿಹೆ ಕೇಳಿರಣ್ಣಾ. ನಿರ್ಮಾಯ ನಿಶ್ಚಿಂತ ನಿರ್ಗಮನ ನಿರುಪಮ ನಿರ್ಮೋಹಿ ನಿರ್ಲೇಪ ನಿಃಕಳಂಕ ನಿರ್ದೇಹಿ ನಿರಂಜನ ಪರಶಿವನು, ಅಂತಪ್ಪ ಶಿವನ ಕೂಡಿದಾತನೆಂತಿಹನೆಂದಡೆ, ನಡೆವುದು ಶಿವಮಾರ್ಗ, ನುಡಿವುದು ಶಿವಾನುಭಾವ, ಮಹಾನುಭಾವಿಗಳ ಸಂಭಾಷಣೆ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಶಿವಮಂತ್ರದೊಡನೆ ಕೂಡಿದ ಮಹಾತ್ಮನೆ ಮಹಾಂತಿನ ಕೂಡಲದೇವರೆಂಬೆನಯ್ಯಾ, ಉಳಿದ ಪಶು ಪ್ರಾಣಿಗಳ ಹುಸಿಯೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.