Index   ವಚನ - 106    Search  
 
ಈಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ, ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ. ಆ ವಾಯುವನಧೋಮುಖಕ್ಕೆ ತರಬಾರದೆಂದು, ಊರ್ಧ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ ಅಷ್ಟಾಂಗಕರ್ಮಿಗಳು ಕೇಳಿರೊ. ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ ? ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ ? ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ? ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ ? ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ ? ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ? ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ, ಕಂಡೆಹೆನೆಂಬ ಭ್ರಾಂತೆಲ್ಲಿಯದೊ? ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ ಕೆಟ್ಟರಲ್ಲ ಕರ್ಮಯೋಗಿಗಳು. ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ.