Index   ವಚನ - 124    Search  
 
ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ. ಅದನೇನ ಹೇಳುವೆ ? ಕಣ್ಣಿಂಗೆ ರೂಪಿಲ್ಲ. ಕೈಗೆ ಹಿಡಿಯಿಲ್ಲ. ನೆನೆವುದಕ್ಕಗೋಚರವಾಗಿ ನಿಂದು ಸುಳಿಯಿತ್ತು ನೋಡಾ. ಆ ಸುಳುಹಿನ ಮರೆಯಲ್ಲಿ ಬಂದು ಹಿಡಿಯಲಾಗಿ, ಕೂಸು ಸತ್ತು, ಅತ್ತ ನೀರಿನಲ್ಲಿ ಮುಕ್ತಿಯೆಂಬವಳು ಹುಟ್ಟಿದಳು. ಮುಕ್ತಿಯ ಬಸುರಲ್ಲಿ ಸತ್ತವರೆಲ್ಲ ಐದಾರೆ. ಹೊತ್ತುಹೋರಿ ಕರೆಯಲಾಗಿ, ನಿಚ್ಚಟದ ಅಲಗ ಹಿಡಿದು ಕುತ್ತಿದರಯ್ಯಾ, ಹೊಟ್ಟೆಯ ಹುರಿಯ. ಕುತ್ತಿದ ಬಾಯಲ್ಲಿ ಕೂಳ ಸುರಿದು, ಅವರೆಲ್ಲ ಉಂಟಾದರು. ಅವರಿಗಿನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ ?