Index   ವಚನ - 135    Search  
 
ಉದಕದಲ್ಲಿ ಮಜ್ಜನವ ಮಾಡಿ, ಇಹ ಪರವ ಹರಿದವರಾರುವ ಕಾಣೆ. ಪುಷ್ಪದಲ್ಲಿ ಪೂಜೆಯ ಮಾಡಿ, ಪುನರಪಿಯ ಗೆದ್ದವರನಾರನು ಕಾಣೆ. ಕರ್ಮದಿಂದ ಒದವಿದ ಸುಖ, ಚರ್ತುವಿಧಕ್ಕೆ ಒಳಗಲ್ಲದೆ ಹೊರಗಾದುದಿಲ್ಲ. ಕರ್ಮವ ಮಾಡುವಲ್ಲಿ ಧರ್ಮವನರಿದಡೆ, ಅದು ಪಥಕ್ಕೆ ಹೊರಗೆಂದೆ. ಮೌಕ್ತಿಕ ಉಂಡ ಜಲಕ್ಕೆ ರಾಗ ಉಂಟೆ ಅಯ್ಯಾ ? ಅಮೃತದಲೊದಗಿರ್ದ ಆಜ್ಯವ ಧರಿಸಿದ ಜಿಹ್ವೆಗೆ ಕರತಳ ಉಂಟೆ ಅಯ್ಯಾ ? ಕರದಲ್ಲದೆ ಅರಿದು ಹಿಡಿದವಂತೆ ಬಿಡುಗಡೆ ಇನ್ನೇನೊ ? ಅರಿದಡೆ ತಾ, ಮರೆದಡೆ ಜಗವೆಂಬ ಉಭಯವ ಹರಿದಾಗವೆ ಪೂಜಕನಲ್ಲ, ಪ್ರತಿಷ್ಠೆಯಲ್ಲಿ ಪರಿಣಾಮಿಯಲ್ಲ, ಸ್ವಯಂಭುವಿನಲ್ಲಿ ಸ್ವಾನುಭಾವಿಯಲ್ಲ. ಏನೂ ಎನಲಿಲ್ಲವಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತಾನೆಯಾಗಿ.