Index   ವಚನ - 186    Search  
 
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙ್ತಿಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು ? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯದೊ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ ?